ನೀರಿನ ಬಸಿತ -
ಅನಾವಶ್ಯಕವಾದ ನೀರನ್ನು ಹಿಂಗಿಸುವ ಏರ್ಪಾಡು. ವಿಶಾಲ ಪ್ರದೇಶಗಳಲ್ಲಿ ದೊಡ್ಡ ಯಂತ್ರಗಳ ಬಳಕೆ ಈ ಕೆಲಸಕ್ಕೆ ಅವಶ್ಯವಾಗುತ್ತದೆ. ಆದರೆ ಗದ್ದೆಗಳಿಂದ ಹತ್ತಿರದ ಹಳ್ಳಕ್ಕೆ ನೀರನ್ನು ಸಾಗಿಸುವಾಗ ವ್ಯವಸಾಯದ ನೀರ್ಗಾಲುವೆಗಳು ಸಾಕು. ಸಸಿಗಳ ಬೇರುಗಳಿಗೆ ಆಕ್ಸಿಜನ್ ಬೇಕು. ಆದರೆ ಮಣ್ಣಿನಲ್ಲಿರುವ ರಂಧ್ರಗಳು ನೀರಿನಿಂದ ಮುಚ್ಚಿದರೆ ವಾಯು ಒಳಕ್ಕೆ ಬರಲಾಗುವುದಿಲ್ಲ. ಇಂಗಾಲದ ಡೈಆಕ್ಸೈಡ್ ಹೊರಗೆ ಹೋಗಲೂ ಆಗುವುದಿಲ್ಲ. ಆಗ ಪೈರುಗಳು ಸೊರಗಿ ಆ ಜಾಗದಲ್ಲಿ ಕಳೆಗಳು ಬೆಳೆಯುತ್ತವೆ. ಸಸಿಯ ಸೂಕ್ಷ್ಮವಾದ ರಂಧ್ರಗಳಿಂದ ಬರುವ ನೀರಿಗೆ ನೀರ್ಗಾಲುವೆಗಳಿಂದ ತಡೆಯಾಗುವುದಿಲ್ಲ. ಇಂಥ ರಂಧ್ರಗಳು ಒಣಗಿದ ಮಣ್ಣಿನ ತೂಕದ ಶೇಕಡ 30ರ ವರೆಗೂ ಇರುವುದೆಂದು ಅಂದಾಜು ಮಾಡಿದ್ದಾರೆ.

ನೀರಿನ ಬಸಿತಕ್ಕಾಗಿ ನೀರ್ಗಾಲುವೆಗಳನ್ನು ಸಂವಿಧಾನ ಮಾಡುವಾಗ ಹೆಚ್ಚಾದ ನೀರು ಬುಗ್ಗೆಯಿಂದ ಬರುತ್ತದೆಯೋ ಮೇಲೆ ಎತ್ತರವಾದ ಭೂಮಿಯಲ್ಲಿ ಜಿನುಗಿ ಬರುತ್ತದೆಯೋ ಅಥವಾ ನೀರು ನುಗ್ಗದ ಕೆಳಗಿನ ಪದರದಿಂದ ಮೇಲಕ್ಕೆ ಎಸೆದಿದೆಯೋ ಪರೀಕ್ಷಿಸಬೇಕು. ಮಳೆಯ ನೀರನ್ನು ಮೇಲಿನಿಂದಲೇ ಆಚೆಗೆ ಸಾಗಿಸಬೇಕು ಅಥವಾ ಕೆಳಮಣ್ಣಿನೊಳಕ್ಕೆ ಜಿನುಗಲು ಬಿಡಬಹುದು. ಮರಳು ಅಥವಾ ಗ್ರ್ಯಾವೆಲ್ಲಿನಲ್ಲಿ ಇದು ಸುಲಭ. ಒಂದು ವೇಳೆ ಅದರಲ್ಲಿ ಒಳಕ್ಕೆ ನೀರನ್ನು ಬಿಡದ ಪದರವೇ ಇದ್ದರೂ ಹೇಗಾದರೂ ಅದನ್ನು ಹೊರಗೆ ಸಾಗಿಸಲೇಬೇಕು. ಸುದ್ದೆಮಣ್ಣಿನಲ್ಲಿ ನೀರು ಒಳಕ್ಕೆ ಜಿನುಗುವುದಿಲ್ಲ. ಅಂಥ ಕಡೆ ನೀರ್ಗಾಲುವೆಗಳು ಅವಶ್ಯವಾಗುತ್ತದೆ. ಆಗ ನೀರು ಒಳಕ್ಕೆ ಜಿನುಗುವ ಹಾಗೆ ನಾಲೆಗಳನ್ನೇ ಅಗೆಯಬೇಕಾಗಬಹುದು. ಈ ನಾಲೆಗಳು 75 ಸೆಂಮೀನಿಂದ 90 ಸೆಂಮೀ ಆಳವಾಗಿದ್ದು ಒಂದಕ್ಕೊಂದು 10ರಿಂದ 13 ಮೀಟರ್ ದೂರವಾಗಿರಬಹುದು. ಇವು ಸಾಧ್ಯವಾದಷ್ಟು ಮಟ್ಟಿಗೂ ನೇರವಾಗಿ ಇಳಿಜಾರಾದ ನೆಲದ ಮೇಲೆ ಇಳಿಯಬೇಕು. ಈ ನಾಲೆಗಳು ಇವಕ್ಕೆ ಲಂಬಕೋನವಾಗಿರುವ ಮುಖ್ಯ ನಾಲೆಗಳಿಗೂ ಮುಂದೆ ಇವು ಒಂದು ಹಳ್ಳಕ್ಕೂ ಬೀಳುತ್ತದೆ.

ಮಣ್ಣಿನಿಂದ ನೀರು ಬಿರುಕುಗಳಲ್ಲಿ ಇಳಿದು ಹಳ್ಳಕ್ಕೆ ಹೋಗಿ ಸೇರುತ್ತದೆ. ಜೇಡಿ ಮಣ್ಣಿನಲ್ಲಿ ನೀರನ್ನು ಸಾಗಿಸುವುದು ಕಷ್ಟ. ಗದ್ದೆಯಿಂದ ನೀರನ್ನು ಬೇಗ ಸಾಗಿಸುವುದರಿಂದ ಅನೇಕ ಅನುಕೂಲತೆಗಳುಂಟು. ಸಾಗುವಳಿ ಸುಲಭವಾಗುತ್ತದೆ. ಬೀಜಗಳು ಬೇಗ ಮೊಳೆಯುತ್ತವೆ. ವಸಂತ ಋತುವಿನಲ್ಲಿ ಮಣ್ಣು ಬೇಗ ಬೆಚ್ಚಗಾಗುವುದರಿಂದ ಸಸಿಗಳು ಶೀಘ್ರವಾಗಿ ಬೆಳೆಯುತ್ತದೆ. ಬೇರುಗಳು ಮಣ್ಣಿನಲ್ಲಿ ಆಳವಾಗಿ ಹೋಗುತ್ತವೆ. ಹೆಚ್ಚು ಆಕ್ಸಿಜನ್ನಿನ ಸರಬರಾಜಾಗುತ್ತದೆ. ತೇವವುಳ್ಳ ಭೂಮಿಯಲ್ಲಿ, ಬೆಂಗಾಡಿನಲ್ಲಿ ನೀರು ಹೇಗೋ ಹಾಗೆ, ಸಸಿಗಳಿಗೆ ಆಕ್ಸಿಜನ್ ಅವಶ್ಯವಾಗುತ್ತದೆ. ವಿವಿಧವಾದ ಬೆಳೆಗಳನ್ನು ಬೆಳೆಸಬಹುದು.

ಸಮಗ್ರವಾದ ನೀರಿನ ಬಸಿತ : ಇದು ಜಲಾನಯನ ಭೂಮಿಯ ಎಲ್ಲ ಭಾಗಗಳಿಗೂ ಅನ್ವಯಿಸುತ್ತದೆ. ಇದರಿಂದ ಭೂಮಿಯ ಮೇಲೆ ಬೀಳುವ ಹೆಚ್ಚಾದ ನೀರನ್ನು ತೆಗೆಯಬಹುದು. ಇಲ್ಲವೆ ನಿಯಂತ್ರಣ ಮಾಡಬಹುದು. ಭೂಮಿಯ ಮೇಲೆ ಬೀಳುವ ನೀರು ನೆಲದೊಳಕ್ಕೆ ಧಾರಾಳವಾಗಿ ಇಳಿದು, ಇಲ್ಲವೆ ಮೇಲೆ ಹರಿದು, ಕೆಲವೇ ಜಾಗಗಳಲ್ಲಿ ಕೂಡಿ ಹಾಕುವುದನ್ನು ನೀರ್ಗಾಲುವೆಗಳು ತಪ್ಪಿಸುತ್ತವೆ. ಹೆಚ್ಚಾಗಿ ಬಿದ್ದ ನೀರು ಕೆಲವು ಕಾಲ ಅಥವಾ ವರ್ಷವೆಲ್ಲ ನೀರು ತುಂಬಿದ ಮಣ್ಣು, ಜೌಗು ನೆಲ ಅಥವಾ ಪ್ರವಾಹದಲ್ಲಿ ಮೇಲೆ ನೀರು ಉರುಳಿದ ಭೂಮಿ-ಈ ರೂಪದಲ್ಲಿ ಕಾಣಿಸಿಕೊಳ್ಳಬಹುದು. ಇಂಥ ಸನ್ನಿವೇಶಗಳಲ್ಲೆಲ್ಲ ನೀರಿನ ಸಾಗಣೆ ಆ ಪ್ರದೇಶದಲ್ಲಿ ತೊಂದರೆಯನ್ನು ತಪ್ಪಿಸಬಹುದು. ನಾವು ಅನುಸರಿಸಬೇಕಾದ ಕ್ರಮಗಳೂ ಒಂದು ಜಾಗದಲ್ಲಿ ಭೂಮಿಯ ಕೆಳಗಡೆ ಅಗೆದ ನಾಲೆಗಳಾಗಿರಬಹುದು ; ಅಥವಾ ಜೌಗು ಪ್ರದೇಶವನ್ನು ವ್ಯವಸಾಯಯೋಗ್ಯವಾಗಿ ಮಾಡಲು ಅಗೆದ ಶಾಖೋಪಶಾಖೆಗಳುಳ್ಳ ನಾಲೆಗಳ ಸಮೂಹವಾಗಿರಬಹುದು ; ಇಲ್ಲವೆ ನದಿಯ ದಡದಲ್ಲಿ ಮಹಾಪ್ರವಾಹವಾಗಿರಬಹುದು ; ಇಲ್ಲವೆ ಮಹಾಪ್ರವಾಹದ ಕಾಲದಲ್ಲಿ ಮುಳುಗಡೆಯಾಗುವ ನೂರಾರು ಚದರ ಕಿಲೊಮೀಟರುಗಳನ್ನು ರಕ್ಷಿಸಲು ಕಟ್ಟಿದ ಏರಿಗಳಾಗಿರಬಹುದು. ಹೊಳೆಯನ್ನೇ ಅವಶ್ಯವಾದ ಕಡೆ ಆಳವಾಗಿ ಮಾಡಿರಬಹುದು. ನದಿ ಸಮುದ್ರಕ್ಕೆ ಹೋಗುವ ದಾರಿಯಲ್ಲಿ ಹೊಸದಾಗಿ ಭೂಮಿಯನ್ನು ಕೃಷಿಯೋಗ್ಯವಾಗಿ ಮಾಡುವುದನ್ನು ಬಿಟ್ಟು ಪಕ್ಕದ ಭೂಮಿಗೆ ಅಪಾಯವನ್ನು ಮಾಡದ ಹಾಗೆ ನೀರಾವರಿಗೆ ಅವಶ್ಯವಾಗುವುದಕ್ಕಿಂತ ಹೆಚ್ಚಿನ ನೀರನ್ನು ಕಾಲುವೆಗಳ ಮೂಲಕ ಆಚೆಗೆ ಸಾಗಿಸುವುದು ನೀರಿನ ಸಾಗಣೆಯ ಮುಖ್ಯವಾದ ಕೆಲಸ.

ನೈಸರ್ಗಿಕವಾದ ಸ್ಥಿತಿಯಲ್ಲಿ ಸಸ್ಯವರ್ಗದ ನೆರವಿನಿಂದ ಬೀಳುವ ಮಳೆಯ ನೀರನ್ನು ನಿಯಂತ್ರಣ ಮಾಡುವ ಸಾಮಥ್ರ್ಯ ಭೂಮಿಯ ಮಣ್ಣಿಗೆ ಸ್ವಾಭಾವಿಕವಾಗಿಯೇ ಇದೆ. ಮೇಲೆ ಬೆಳೆದ ಗಿಡಗಳು ಮಳೆಯ ಹೊಡೆತವನ್ನು ತಡೆದು ಮೇಲಿನ ಮಣ್ಣನ್ನು ಕಾಪಾಡುತ್ತದೆ. ನೆಲದಲ್ಲಿಯ ಸಸ್ಯಸಂಬಂಧವಾದ ಗೊಬ್ಬರ ಮಳೆಯ ಅಧಿಕ ಭಾಗವನ್ನು ಹೀರಬಲ್ಲದು. ಇದಲ್ಲದೆ ಮಣ್ಣಿನ ರಚನೆಯೇ ಉಳಿದ ನೀರು ಒಂದೇ ಸಮವಾಗಿ ಕೆಳಗೆ ಜಿನುಗುವಂತೆ ಮಾಡುತ್ತದೆ. ಇನ್ನೂ ಹೆಚ್ಚಾದ ನೀರು ನೆಲವನ್ನು ಕೊರೆಯದೇ ಹಳ್ಳಗಳಿಗೆ ಸೇರಿ, ಜೀವನದಿಯೊಂದಕ್ಕೆ ಬಿದ್ದು ಅದರ ಅಗಲವನ್ನೂ ಆಳವನ್ನೂ ಸಮುದ್ರದ ಕಡೆಗೆ ಹರಿದ ಹಾಗೆ ಹೆಚ್ಚಿಸುತ್ತದೆ. ನದಿಯ ಕೆಳಗಿನ ಮಜಲುಗಳಲ್ಲಿ ಮೆಕ್ಕಲು ಮಣ್ಣು ತುಂಬಿದ ಪ್ರದೇಶಗಳು ಆಗಾಗ ಪ್ರವಾಹಗಳಿಗೆ ಗುರಿಯಾದರೂ ಫಲವತ್ತಾಗಿವೆ.

ನೀರ್ಗಾಲುವೆಗಳ ಇತಿಹಾಸದಲ್ಲಿ ಮೇಲ್ಪಾಡು ಸ್ಥಳೀಯವಾದ ಸ್ವತಂತ್ರ ಪ್ರಯತ್ನಗಳಿಂದ, ಜಲಾನಯನ ಭೂಮಿಯಲ್ಲಿ ಎಲ್ಲ ಕಡೆಗಳಲ್ಲಿಯೂ ಹೆಚ್ಚಾದ ನೀರಿನ ನಿಯಂತ್ರಣಕ್ಕೆ ಅನ್ಯೋನ್ಯ ಸಹಾಯವುಳ್ಳ ಅಭಿವೃದ್ಧಿಯ ಕ್ರಮಗಳ ಕಡೆಗೆ ತಿರುಗುತ್ತದೆ. ಬಿದ್ದ ಮಳೆಯ ನೀರು ನೈಸರ್ಗಿಕವಾಗಿ ಕೆಳಕ್ಕೆ ಹರಿದ ಜಾಗಗಳಲ್ಲಿ ಜನ ಮೊದಲಿಗೆ ನೆಲಸಿದರು. ಕಾಲಾನುಕ್ರಮದಲ್ಲಿ ಸುಸಂಘಟಿತವಾದ ನೀರ್ಗಾಲುವೆಗಳ ಯೋಜನೆಗಳು ರೂಪುಗೊಂಡವು. ಹೊಲಗದ್ದೆಗಳಲ್ಲಿ ಮೊದಲ ಪ್ರಯತ್ನಗಳೂ ತೆಟ್ಟೆಯಾದ ಕಾಲುವೆಗಳಿಂದ ಪ್ರಾರಂಭವಾದವು. ಆದರೆ ಇಂಗ್ಲೆಂಡಿನಲ್ಲಿ 15ನೆಯ ಶತಮಾನದಲ್ಲಿಯೇ ಭೂಗರ್ಭದ ನಾಲೆಗಳಿದ್ದವು. 18ನೆಯ ಶತಮಾನದಲ್ಲಿ -ಆಕಾರದ ಮಣ್ಣಿನ ಹಂಚುಗಳನ್ನು ಚಪ್ಪಟೆಯಾದ ಹಂಚುಗಳ ಮೇಲುಗಡೆ ಇಟ್ಟು ನಾಲೆಯನ್ನು ತಯಾರಿಸುತ್ತಿದ್ದರು. 19ನೆಯ ಶತಮಾನದ ಮಧ್ಯ ಭಾಗದಲ್ಲಿ ಯಂತ್ರದ ಸಹಾಯದಿಂದ ಉರುಳೆಯ ಆಕಾರದ ಕೊಳಾಯಿಗಳನ್ನು ತಯಾರಿಸುತ್ತಿದ್ದರು. ಆಮೇಲೆ ಕಾಂಕ್ರೀಟಿನ ಕೊಳಾಯಿಗಳು ಬಂದುವು. ಆದರೂ ಜಿಗಟು ಮಣ್ಣಿನಲ್ಲಿ ನೆಲದ ಕೆಳಗಡೆ ನಾಲೆಗಳನ್ನು ಬೇರೆ ಯಾವ ಆಧಾರವೂ ಇಲ್ಲದೆ ಕೊರೆದು ಸುದ್ದೆಮಣ್ಣಿನ ಬಿಗಿತದಿಂದಲೇ ನಿಲ್ಲುವಂತೆ ಮಾಡುವುದು ಸಾಧ್ಯವಾಗಿತ್ತು.

ತಮ್ಮ ಭೂಮಿಯಲ್ಲಿ ನೀರ್ಗಾಲುವೆಗಳನ್ನು ವೈಯಕ್ತಿಕವಾಗಿ ರೈತರೂ ಜಮೀನುದಾರರೂ ತೋಡುತ್ತಿದ್ದರೂ ಭಾರಿ ಕೆಲಸಗಳನ್ನು ಖಾಸಗಿ ಕಂಪೆನಿಗಳೂ ನ್ಯಾಯಾಂಗದಿಂದ ರಚಿತವಾದ ಸಂಸ್ಥೆಗಳೂ ಕೈಗೊಂಡವು. 1861ರಲ್ಲಿ ಇಂಗ್ಲೆಂಡಿನಲ್ಲಿ ಭೂಮಿಯ ನೀರ್ಗಾಲುವೆಯ ಕಾನೂನು ಬಂದ ಮೇಲೆ ಬಳಿಕ ಈ ದಿಕ್ಕಿನಲ್ಲಿ ಮುನ್ನಡೆ ಚುರುಕಾಯಿತು. ಅಮೆರಿಕ ಸಂಯುಕ್ತ ಸಂಸ್ಥಾನಗಳಲ್ಲಿ ನೀರ್ಗಾಲುವೆಗಳ ಯೋಜನೆಗೆ ಉತ್ತೇಜನ, ಭಾರಿ ಮಳೆ ಬಿದ್ದಾಗ ಆ ನೀರನ್ನು ಭೂಮಿಯ ಮೇಲೂ ನೆಲದಲ್ಲಿ ಸಸಿಗಳ ಬೇರುಗಳ ವಲಯದಲ್ಲಿಯೂ ಉಳಿಸಿಕೊಳ್ಳುವ ದರದಿನಿಂದ ಬಂತು. ಮಳೆಯ ನೀರು ತಾನಾಗಿ ಭೂಮಿಯ ಮೇಲೆ ನಿಲ್ಲಬೇಕಾದರೆ ಮಣ್ಣಿನಲ್ಲಿ ನೀರು ನಿಧಾನವಾಗಿ ಇಳಿಯುವ ಹಾಗಿರಬೇಕು. ನೆಲ ಮಟ್ಟಸವಾಗಿರಬೇಕು. ನೀರ್ಗಾಲುವೆಗಳಲ್ಲಿ ಚುರುಕಾಗಿ ಹರಿಯಬಾರದು. ಸ್ವಾಭಾವಿಕವಾದ ನಾಲೆಗಳನ್ನು ತೋಡಬೇಕು. ಕೆಲವು ವಿಶೇಷವಾದ ಸಂದರ್ಭಗಳಲ್ಲಿ ಭೂಮಿಯ ತಗ್ಗದ ದಿಬ್ಬಗಳು ಮತ್ತು ಅಗಲವಾದ ಆಳವಿಲ್ಲದ ನಾಲೆಗಳನ್ನು ಮಾಡಿ ಈ ನಾಲೆಗಳು ನೈಸರ್ಗಿಕವಾದ ಹಳ್ಳಗಳಿಗೆ ಹೋಗಿ ಸೇರುವ ಹಾಗೆ ಮಾಡಬೇಕು.
ಸಸ್ಯಗಳ ಬೇರುಗಳ ವಲಯದಲ್ಲಿ ಮಣ್ಣೂ ನೀರನ್ನು ಕೆಳಕ್ಕೆ ಬಿಡದ ಹಾಗಿದ್ದರೆ 10 ಅಥವಾ 13 ಸೆಂಮೀ ಅಗಲದ ಜಿಗಟು ಮಣ್ಣು, ಇಲ್ಲವೆ ಕಾಂಕ್ರೀಟಿನ ಹಂಚುಗಳನ್ನು ಜೋಡಿಸಲಾಗುತ್ತದೆ. ಆಗಾಗ ಇಲ್ಲವೆ ಕಾಯಂ ಆಗಿ ಒಳನೀರಿನ ಮಟ್ಟ ಸಸ್ಯಗಳ ಬೇರುಗಳ ವಲಯದಲ್ಲಿದ್ದರೆ ಕೆಳಗಡೆ ಚರಂಡಿಗಳನ್ನು ತೋಡಬೇಕಾಗುತ್ತದೆ. ಸಾಮಾನ್ಯವಾಗಿ ನೀರಾವರಿಯ ಯೋಜನೆಗಳಲ್ಲಿ ಕೆಲವು ಜಮೀನಿಗೆ ಈ ಬಗೆಯ ನೀರ್ಗಾಲುವೆ ಬೇಕಾಗುತ್ತದೆ. ತೇವದ ಪ್ರದೇಶದಲ್ಲಿ ಅಂತರ್ಜಲದ ಮಟ್ಟ ಎತ್ತರದಲ್ಲಿರುವಾಗ ಮೇಲೆ ಹೇಳಿದಂತೆ ಕಾಂಕ್ರೀಟಿನ ಹಂಚುಗಳನ್ನು ಜೋಡಿಸಬೇಕು. ನೀರಾವರಿಯಾಗುವ ಪ್ರದೇಶಗಳಲ್ಲಿ ನೀರಿನಲ್ಲಿ ವಿಲೀನವಾಗುವ ಉಪ್ಪುಗಳು ಹೆಚ್ಚಾಗಿರುವುದರಿಂದಲೂ ಕೆಳಗಡೆ ಸಣ್ಣ ರಂಧ್ರಗಳಿಂದ ತುಂಬಿದ ಮಣ್ಣಿರುವುದರಿಂದಲೂ ಹಂಚಿನ ಚರಂಡಿಗಳೂ ತೆರೆದ ಗುಂಡಿಗಳೂ 2ರಿಂದ 3 ಮೀಟರುಗಳವರೆಗೂ ಆಳವಾಗಿರಬೇಕಾಗುತ್ತದೆ.
(ಎಚ್.ಸಿ.ಕೆ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ